ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’

ಸುಶಿ ಕಾಡನಕುಪ್ಪೆ

ಜೈಭೀಮ್ ಚಿತ್ರ ನೋಡಲು ಶುರು ಮಾಡಿದಾಗ ನಾನು ೨೦೦೬-೭ರ ಸಮಯದಲ್ಲಿ ರಾಮನಗರ ಜಿಲ್ಲೆಯ ಇರುಳಿಗರ ಬಾಯಿಯ ಆರೋಗ್ಯದ ಬಗ್ಗೆ ನಡೆಸಿದ್ದ ಸಂಶೋಧನೆಯ ಕ್ಷೇತ್ರ ಕಾರ್ಯದ ದಿನಗಳು ನೆನಪಾದಾವು. ಎಂ.ಡಿ.ಎಸ್ ಸ್ನಾತಕೋತ್ತರ ಪದವಿಗೆ ಸಂಶೋಧನಾ ಪ್ರಬಂಧಕ್ಕಾಗಿ ಯಾವ ವಿಷಯ ಆರಿಸಿಕೊಳ್ಳಲಿ ಎಂದು ಯೋಚಿಸುತ್ತಿರುವಾಗ ನನ್ನ ಹಳ್ಳಿ ಕಾಡನಕುಪ್ಪೆಯಲ್ಲಿ‌ ನಾನು ಬೇಸಿಗೆ ರಜೆಯಲ್ಲಿ ಕಳೆದ ನನ್ನ ಬಾಲ್ಯದ ದಿನಗಳು ನೆನಪಾದವು.

ಅಲ್ಲಿ ನಮ್ಮ ಅಜ್ಜಿ ತಾತನ ಮನೆಯ ಹಿಂಬದಿಯಲ್ಲಿ ಸ್ವಲ್ಪವೇ ದೂರದಲ್ಲಿ ಊರಿನ‌ ಅಂಚಿಗಿದ್ದ ಇರುಳಿಗರ ದೊಡ್ಡಿಯಲ್ಲಿ ಆಟವಾಡಿದ್ದು, ನನ್ನ ಅಜ್ಜಿ ನಮ್ಮ ಹೊಲದಲ್ಲಿ ದುಡಿದು ಬರುತ್ತಿದ್ದ ಇರುಳಿಗರಿಗೆ ಊಟ ಬಡಿಸುತ್ತಿದ್ದುದು ನೆನಪಾಗಿ ಆ ಬುಡಕಟ್ಟಿನ ಜನರ ಬಾಯಿಯ ಆರೋಗ್ಯದ ಬಗ್ಗೆ ಯಾವ ಸಂಶೋಧನೆಗಳೂ ನಡೆದಿಲ್ಲವೆಂದು ತಿಳಿದುಕೊಂಡೆ. ನಮ್ಮ ತಂದೆ ಇರುಳಿಗರ ಮೇಲೆ ಸಂಶೋಧನೆ ನಡೆಸಿ‌ ಪಿ.ಎಚ್ಡಿ ಪ್ರಬಂಧ ಮಂಡಿಸಿದ್ದ ಡಾ. ಭೈರೇಗೌಡರ ಪುಸ್ತಕವನ್ನು ನನಗೆ ಓದಲು ಕೊಟ್ಟರು. ‘ಡಾ. ಭೈರೇಗೌಡರನ್ನು ಭೇಟಿ ಮಾಡಿ ನಿನ್ನ ಅರಿವನ್ನು ಮೊದಲು ವಿಸ್ತರಿಸಿಕೋ, ನಂತರ ನಿನ್ನ‌ ಸಂಶೋಧನೆಯ ರೂಪುರೇಷೆಗಳನ್ನು ಕಟ್ಟಿಕೋ’ ಎಂದು ಅಪ್ಪ ಸಲಹೆ ನೀಡಿದ್ದರು.

ನಮ್ಮ ಊರಿನ ಕಡೆ ‘ಇರುಳಿಗ’ ಬುಡಕಟ್ಟು ಜನರನ್ನು ‘ಇಲ್ಲಿಗರು’ ಎಂದೂ ಕರೆಯುತ್ತಾರೆ. ‌ನಾನು ಸುಮಾರು ೨೬ ಹಳ್ಳಿಗಳಲ್ಲಿ ಅವರು ನೆಲೆಸಿರುವ ಇರುಳಿಗರ ದೊಡ್ಡಿಗಳಲ್ಲಿ ಓಡಾಡಿದೆ. ಅವರು ಪ್ರೀತಿಯಿಂದ ಕೊಡುತ್ತಿದ್ದ ಬೆಲ್ಲದ ಬಿಸಿ ಹಾಲು ಸವಿದಿದ್ದೇನೆ. ನನ್ನ‌ ಕ್ಷೇತ್ರ ಕಾರ್ಯಕ್ಕೆ ನನ್ನ ಪ್ರೀತಿಯ ಚಿಕ್ಕಪ್ಪ ಚಿಕ್ಕಪ್ಪಾಜಿಯವರು, ನನ್ನ ಚಿಕ್ಕಮ್ಮ ಸುಮಿತ್ರ ಅವರು, ನನ್ನ ಅಜ್ಜಿ ತಾತ, ಹಳ್ಳಿಯ ಹಲವು ಮಂದಿ ಸುಮಾರು ಮೂರು ತಿಂಗಳಿಗೂ ಹೆಚ್ಚು ನನ್ನ ಜೊತೆ ಒಡನಾಡಿಗಳಾಗಿದ್ದರು. ಇರುಳಿಗರ ಪ್ರಕೃತಿ ಸಹಜವಾಗಿ ಬದುಕುವ ಬುಡಕಟ್ಟು ಜನಾಂಗದ ಜೀವನಶೈಲಿಯಲ್ಲಿ ನಾಗರೀಕತೆ ತಂದಿಟ್ಟ ಬದಲಾವಣೆಗಳನ್ನು ಗಮನಿಸಿದ್ದೆ.

ರಾಮನಗರ ಹಂದಿಗುಂದಿ ಬೆಟ್ಟ, ರಾಮದೇವರ ಬೆಟ್ಟದ ಅಂಚಿನಲ್ಲಿ ವಾಸಿಸುವರ ಸಂಖ್ಯೆ ಆಗಲೇ ಕಮ್ಮಿಯಾಗಿತ್ತು. ಅವರನ್ನು ಒಕ್ಕಲೆಬ್ಬಿಸಿದ ಮೇಲೆ ಹಳ್ಳಿಗಳ ಅಂಚಿನಲ್ಲಿ ಇವರ ದೊಡ್ಡಿ ಇರುತ್ತಿದ್ದರೂ ಬೆಟ್ಟಕ್ಕೆ ಹತ್ತಿರವಾಗೇ ಇರುತಿತ್ತು. ಹೊಟ್ಟೆಪಾಡಿಗೆ ಅನಿವಾರ್ಯವಾಗಿ ಅವರು ಜೆಲ್ಲಿ ಕಲ್ಲನ್ನು ಕುಟ್ಟುವುದನ್ನೂ ನಾನು ನೋಡಿದ್ದೆ. ಈ ಎಲ್ಲಾ ಹಳ್ಳಿಗಳಲ್ಲಿ ಅವರು ಕುಡಿಯುವ ನೀರನ್ನು ಸಂಗ್ರಹಿಸಿ ಫ್ಲೂರೈಡ್ ಅನಾಲಿಸಿಸ್ ಮಾಡಿಸಲಾಗಿತ್ತು. ಈ ನೀರಿನ ಸಂಗ್ರಹಣೆಗೆ ನನ್ನ ತಮ್ಮ ನೇಸರ ತುಂಬಾ ಸಹಾಯ ಮಾಡಿದ್ದರು.

ಇರುಳಿಗರ ಬಾಯಿಯ ಆರೋಗ್ಯದ ಬಗ್ಗೆ ನಡೆಸಿದ ಸಂಶೋಧನೆಯನ್ನು ಇತರ ಸಂಶೋಧಕರಿಗೆ ಮುಟ್ಟಿಸಲು ಮತ್ತು ಬುಡಕಟ್ಟು ಜನಾಂಗದವರ ಬಾಯಿಯ ಆರೋಗ್ಯದ ಮೇಲೆ ನಾಗರೀಕತೆ, ನಗರೀಕರಣದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನದ ಮಾಹಿತಿಯನ್ನು ಪಸರಿಸಲು ಅಂತರಾಷ್ಟ್ರೀಯ ಜರ್ನಲ್ಗಳಲ್ಲಿ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಯಿತು ಎನ್ನುವ ಸಮಾಧಾನವಿತ್ತು. ಇದಕ್ಕೆ ನನ್ನ ಗುರುಹಿರಿಯರ ಪ್ರೋತ್ಸಾಹವಿತ್ತು. ಆದರೆ, ಜೈಭೀಮ್ ಚಿತ್ರವನ್ನು ನೋಡುತ್ತಿರುವಾಗ ನಮ್ಮ ರಾಮನಗರ ತಾಲೂಕಿನ ಇರುಳಿಗರಿಗೆ ಇಂದಿಗೂ ಭೂ ಒಡೆತನ ಸಿಗದೆ ಹಲವಾರು ದಿನಗಳಿಂದ ಪ್ರತಿಭಟಣೆ ನಡೆಸುತ್ತಿರುವ ಚಿತ್ರಣವು ಕಣ್ಣ ಮುಂದೆ ಹಾದು ಹೋಯಿತು. ಅವರು ನನಗೆ ತೋರಿದ ಪ್ರೀತಿ ಅಪಾರ. ಅವರ ಪರಿಸರ ಜ್ಞಾನ, ಸಹಜತೆ, ವಿವೇಕ ಮತ್ತು ತಾಳ್ಮೆ ನನಗೆ ಪಾಠವಾಗಿವೆ.

ಬುಡಕಟ್ಟು ಜನಾಂಗದ ಪರಿಸರದ ನಡುವಿನ ಅವಿನಾಭವ ಸಂಬಂಧವನ್ನು ತಿಳಿಯಲು ಎಡವಿರುವ ನಾಗರೀಕ ಪ್ರಪಂಚ ಈಗಾಗಲೇ ಅದರ ಬೆಲೆ ತೆತ್ತುತಿದೆ. ಈಗಲೂ ನಾವು ಬುಡಕಟ್ಟು ಜನಾಂಗದ ವಿವೇಚನೆ ಮತ್ತು ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳದಿದ್ದರೆ ಮಾನವ ಜನಾಂಗ ಮತ್ತು ಭೂಜೀವಿಗಳ ಉಳಿವು ಕಷ್ಟವಾಗುತ್ತದೆ. ಜೈಭೀಮ್, Papilio Buddha, ಜಟ್ಟ ಸಿನಿಮಾಗಳು ನಮ್ಮ ಅಂತಃಕರಣವನ್ನು ಬಡಿದೆಬ್ಬಿಸುವಲ್ಲಿ ಗೆಲ್ಲುತ್ತವೆ.

‍ಲೇಖಕರು Admin

November 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. AugustinJames

    ಹೆಗಡೆಯವರ 4ನೇ ಗಜಲ್ ತುಂಬಾ ಸುಂದರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: